SRI VYASA TIRTHA VIDYAPEETA

mutt

Sri Vyasatirtha Vidyapeeta

Jnanenaiva param padam

श्री व्यासतीर्थ विद्यापीठम्

ज्ञानेनैव परम् पदम्

Article on Shesha Chandrikaachar by D A Pranav

್ರೀ ಶೇಷಚಂದ್ರಿಕಾಚಾರ್ಯರು

“ ಹರೌ ರುಷ್ಟೇ ಗುರುಸ್ತ್ರಾತಾ ಗುರೌ ರುಷ್ಟೇ ನಕಶ್ಚನ”

ಎಂಬ ಮಾತಿನಂತೆ, ದೇವರು ಒಂದು ವೇಳೆ ನಮ್ಮ ಮೇಲೆ ಕೋಪ ಗೊಂಡರೂ, ಗುರುಗಳು ರಕ್ಷಿಸುತ್ತಾರೆ ,ಆದರೆ ಗುರುಗಳೇ ನಮ್ಮ ಮೇಲೆ ಕೋಪಗೊಂಡರೆ ಯಾರೂ ರಕ್ಷಿಸಲಾರರು.

 ಗುರುಗಳು ಸಂತುಷ್ಟರಾದರೆ ಅವನಿಗಿಂತ ಪುಣ್ಯವಂತರು ಯಾರೂ ಇಲ್ಲ. ಗುರುಗಳು ತಾವು ಬೃಂದಾವನಸ್ಥರಾಗಿದ್ದರೂ ಸಜ್ಜನರನ್ನು, ಭಗವನ್ನಿಷ್ಠರನ್ನು, ಒಳ್ಳೆಯ ನಡತೆಯುಳ್ಳವರನ್ನು ,ಪರರಿಗೆ ಸಹಾಯ ಮಾಡುವವರನ್ನು ಸದಾ ಅನುಗ್ರಹಿಸುತ್ತಾರೆ.

 ಈ ವರ್ಷದ ಜೂನ್ ತಿಂಗಳಿನ 25ರಂದು, ಗರುವಾರ ಚತುರ್ಥಿಯ ತಿಥಿಯಂದು “ಶ್ರೀ ಸೋಸಲೆ ವ್ಯಾಸರಾಜ ಮಠದ” 22ನೆಯ ಯತಿಗಳಾದ, ಶ್ರೀ ವ್ಯಾಸರಾಜರಿಂದ ಹತ್ತನೆಯವರಾದ “ಶ್ರೀ ರಘುನಾಥ ತೀರ್ಥರ”ಆರಾಧನೆ ತಿರುಮಕೂಡಲು ಗ್ರಾಮದಲ್ಲಿ ನಡೆಯುತ್ತದೆ.

ಮೈಸೂರಿನಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿ ತಿರುಮಕೂಡಲು  ಗ್ರಾಮವಿದೆ. ಇದಕ್ಕೆ ದಕ್ಷಿಣ ಕಾಶಿ ಎಂದೂ ಕರೆಯುತ್ತಾರೆ. ಇಲ್ಲಿ ಕಾವೇರಿ ಕಪಿಲಾ ನದಿಗಳ ಹಾಗೂ ಸ್ಫಟಿಕ ಸರೋವರದ ಸಂಗಮವಿದೆ. ಇಂತಹ ತ್ರಿವೇಣೀ ಸಂಗಮದ ದಡದಲ್ಲಿಯೇ  ಶ್ರೀರಘುನಾಥತೀರ್ಥರ ಮೂಲ ಬೃಂದಾವನ ಇರುವುದು.

ಪೂಜ್ಯರಾದ ರಘುನಾಥ ಯತಿಗಳಿಗೆ “ಶ್ರೀ ಶೇಷಚಂದ್ರಕಾಚಾರ್ಯರು “ಎಂದು ಸುಪ್ರಸಿದ್ಧ ನಾಮ. ಈ ಹೆಸರಿಗೆ ಕಾರಣವಿದೆ. “ಶ್ರೀ ಚಂದ್ರಿಕಾಚಾರ್ಯರು “ಎಂದೇ ಪ್ರಸಿದ್ಧರಾದ ಶ್ರೀವ್ಯಾಸರಾಜರು “ತಾತ್ಪರ್ಯ ಚಂದ್ರಿಕಾ” ಎಂಬ ಗ್ರಂಥವನ್ನು ಬ್ರಹ್ಮಸೂತ್ರಗಳ ಎರಡು ಅಧ್ಯಾಯಗಳಿಗೆ  ಮಾತ್ರ ರಚಿಸಿ ಉಳಿದ ಅಧ್ಯಾಯಗಳಿಗೆ ತಮ್ಮ ನಂತರದ ಹತ್ತನೆಯ ಪೀಠಾಧಿಪತಿಗಳು ಬರೆಯುತ್ತಾರೆ ಎಂದು, “ ದಶಮೋ ಮತ್ಸಮೋ ಯೋಗೀ ಚಂದ್ರಿಕಾಂ ಪೂರಯಿಷ್ಯೆತಿ” ಎಂಬ ಭವಿಷ್ಯವಾಣಿಯನ್ನು ನುಡಿದರು. ಅದೇ ರೀತಿಯಲ್ಲಿ ಶ್ರೀ ವ್ಯಾಸರಾಜರಿಂದ ಹತ್ತನೆಯವರಾದ ಶ್ರೀ ರಘುನಾಥ ತೀರ್ಥರು ,ಶ್ರೀ ವ್ಯಾಸರಾಜರು ವ್ಯಾಖ್ಯಾನ ಮಾಡದೆ ಉಳಿಸಿದ ಭಾಗವನ್ನು ಪೂರೈಸಿದರು. ಆದ್ದರಿಂದ ಇವರಿಗೆ “ಶ್ರೀ ಶೇಷಚಂದ್ರಿಕಾಚಾರ್ಯ “ಎಂಬ ಹೆಸರು ಬಂದಿದೆ.

“ಸರ್ವಸರ್ವಂ ಸಹೇಶಾನಾಂ ಸಭಾಸು ಜಿತವಾದಿರಾಟ್|

ಸರ್ವದಾ ಸರ್ವದೋ ಭೂಯಾತ್ ರಘುನಾಥಮುನೀಶ್ವರಃ||”

ಇದು ಅವರನ್ನು ಸ್ಥುತಿಸುವ ಶ್ಲೋಕ.

ಈ ಶ್ಲೋಕದಲ್ಲಿ ಶ್ರೀ ರಘುನಾಥ ಯತಿಗಳ ಮಹಿಮೆಯು ವ್ಯಕ್ತವಾಗುತ್ತದೆ. ಶ್ರೀ ರಘುನಾಥ ತೀರ್ಥರು ಆಗಿನ ಕಾಲದಲ್ಲಿ ಎಲ್ಲಾ ರಾಜರ ಸಭೆಗಳಲ್ಲಿ ತಮ್ಮ ಸಿದ್ಧಾಂತವನ್ನು ಮಂಡಿಸುತ್ತಿದ್ದರು ಹಾಗೆಯೇ ಎಲ್ಲಾ ರಾಜರ ಮನ್ನಣೆಗೆ ಪಾತ್ರರಾಗಿದ್ದರು. ರಘುನಾಥ ತೀರ್ಥರು ಸುಮಾರು 55 ವರ್ಷಗಳ ಕಾಲ ವೇದಾಂತ ಸಾಮ್ರಾಜ್ಯವನ್ನು ಆಳಿದರು.

ಈ ಕೆಳಗಿನ ಸಂಗತಿಯು ಅವರ ಮಹಿಮೆಯನ್ನು ಸೂಚಿಸುತ್ತದೆ.

ಶ್ರೀ ರಘುನಾಥ ತೀರ್ಥರು ಬೃಂದಾವನಸ್ಥರಾದ ಮೇಲೆ ಹೈದರಾಲಿಯು ಸುಲ್ತಾನನಾಗಿದ್ದಾಗ ಗುರುಗಳ ಮೂಲ ಬೃಂದಾವನವನ್ನು ಆ ಸ್ಥಳದಿಂದ ತೆಗಿಸಲು ಯತ್ನಿಸಿದನಂತೆ, ಆದರೆ ಅವನ ಕನಸಿನಲ್ಲಿ ಕಂಡ ಒ0ದು ದೃಶ್ಯದ ಪರಿಣಾಮದಿಂದ ಆ ಘೋರ ಕೃತ್ಯವನ್ನು ಅವನು ಮಾಡಲಿಲ್ಲ. ಆ ಕನಸಿನಲ್ಲಿ, ಹೈದರಾಲಿಯ ಮಗ ಟಿಪ್ಪುವು ಕಾವೇರಿ ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದಂತೆ ,ಆ ಸಂದರ್ಭದಲ್ಲಿ ಒಬ್ಬ ಸಂನ್ಯಾಸಿಯು ಬೃ0ದಾವನದಿಂದ ಹೊರಗೆ ಬಂದು ಟಿಪ್ಪುವನ್ನು ಕಾಪಾಡಿದನಂತೆ. ಈ ಕನಸಿನಿ0ದ ಹೈದರಾಲಿಗೆ ಗುರುಗಳ ಮೇಲೆ ವಿಶೇಷ ಭಕ್ತಿ ಉಂಟಾಯಿತು. ಹಾಗೆಯೇ ಆ ಬೃಂದಾವನವನ್ನು ಉಳಿಸಿದನಂತೆ.

ಶ್ರೀರಘುನಾಥ ತೀರ್ಥರನ್ನು “ ಸರ್ವದಃ” ಎಂದು ಕರೆದಿದ್ದಾರೆ. “ಸರ್ವಂ ದದಾತೀತಿ ಸರ್ವದಃ “ ಎಲ್ಲವನ್ನೂ ಕೊಡತಕ್ಕವರು. ಆದ್ದರಿಂದ ಈ ಜಗತ್ತಿಗೆ ಮಾರಕವಾಗಿರುವಂತಹ ಕೊರೋನಾ ರೋಗವನ್ನು ಪರಿಹಾರ ಮಾಡಿ ಎಲ್ಲರಿಗೂ ವಿಶೇಷ  ಆರೋಗ್ಯಾದಿಗಳನ್ನು ಕೊಟ್ಟು ರಕ್ಷಿಸಲಿ ಎಂದು ಗುರುಗಳಲ್ಲಿ ಪರಿಪರಿಯಾಗಿ ಪ್ರಾರ್ಥಿಸೋಣ.

 

ಡಿ. ಪ್ರಣವಾಚಾರ್ಯ.

Leave a Comment

Your email address will not be published. Required fields are marked *