ತಸ್ಮೈ ಶ್ರೀಗುರವೆ ನಮ:
ಸರ್ವಜ್ಞನಾದ ಪರಿಪೂರ್ಣನಾದ ಪರಬ್ರಹ್ಮನನ್ನು ತಿಳಿದು ತಿಳಿಸಬಲ್ಲ ಒಬ್ಬ ನಿಸ್ವಾರ್ಥ ವ್ಯಕ್ತಿಯೇ ’ಗುರು’. ತಾಯಿ ಇಲ್ಲದೆ ಮಗುವಿನ ಕಲ್ಪನೆಯು ಹೇಗೆ ಅಸಾದ್ಯವೋ ಹಾಗೆ ಗುರುಗಳಿಲ್ಲದೆ ನಮಗೆ ವಿದ್ಯೆಯು ಅಸಾಧ್ಯ, ಅಷ್ಟುಮಾತ್ರವಲ್ಲದೆ ಗುರುಗಳು ಸಂಸಾರವೆಂಬ ಸಮುದ್ರದಲ್ಲಿ ದಾರಿತಪ್ಪದಂತೆ ನಡೆಸಬಲ್ಲ ನಾವಿಕ, ಅಂತಹವರಿಗೆ ನಾವು ಬಾಗಬೆಕು, ಬಾಗಿ ಬಳಿಗೆ ಸಾಗಬೆಕು ಆಗಲೇ ಅವರು ನಮ್ಮನ್ನು ದಡಕ್ಕೆ ಸಾಗಿಸುತ್ತಾರೆ.
“ಗೃಣಾತಿ ಇತಿ ಗುರು:” ಅಂದರೆ ಉಪದೇಶವಾಡುವವನು ಎಂದರ್ಥ. ಜ್ಞನೋಪದೆಶಕರಾದ ಗುರುಗಳಿಗೆ ಜಗತ್ತಿನ ಯಾವ ವಸ್ತುವಿನ ಉಪಮೆಯನ್ನು ಕೊಡುವುದಕ್ಕಾಗುವುದಿಲ್ಲ. ಹಾಗೆ ಕೋಡುವುದಾದರೆ, ತನ್ನ ಸ್ಪರ್ಶದಿಂದಲೆ ತಾಮ್ರವನ್ನು ಬಂಗಾರ ಮಾಡುವ ಸ್ಪರ್ಶಮಣಿಗೆ ಹೋಲಿಸಬಹುದು. ಯಾಕೆಂದರೆ ಗುರುಗಳ ಅನುಗ್ರಹದಿಂದ ಶಿಷ್ಯನೂ ಕೂಡ ಬಂಗಾರದಂತೆ ಲೋಕಪೂಜ್ಯನಾಗುತ್ತಾನೆ. ಆದರೆ ಅದೂ ಸರಿಯಾಗುವುದಿಲ್ಲ, ಸ್ಪರ್ಶಮಣಿಯಿಂದ ಸ್ಪ್ರಶ್ಟವಾದ ಬಂಗಾರ ಪಾತ್ರೆಯ ಸ್ಪರ್ಶವೂ ಬೆರೆ ತಾಮ್ರ ಪಾತ್ರೆಗಾದರೆ ಅದು ಬಂಗಾರವಾಗುವುದಿಲ್ಲ. ಆದರೆ ಗುರ್ವನುಗ್ರಹದಿಂದ ಶಿಷ್ಯನು ಗುರುಗಳೆ ಆಗುತ್ತಾನೆ. ಆ ಶಿಷ್ಯನು ತನ್ನ ಶಿಷ್ಯನನ್ನು ಹಾಗೇ ತಯಾರಿಸಿ ಜ್ಞಾನದೀಪದ ಪರಂಪರೆಯನ್ನು ಬೆಳೆಗಿಸುತ್ತಾನೆ. ಆದ್ದರಿಂದ ಈ ಗುರ್ವನುಗ್ರಹವೆಂಬ ಸ್ಪರ್ಶಮಣಿಯಿಂದ ಸ್ಪ್ರಶ್ಟನಾದ ಶಿಷ್ಯನು ಇನ್ನೊಂದು ಸ್ಪರ್ಶಮಣಿಯೇ ಆಗುತ್ತಾನೇ ಹೊರತು ಬಂಗಾರವಲ್ಲ. ಈ ಅರ್ಥವು ಗುರುಎಂಬ ಎರಡು ಅಕ್ಷರದಲ್ಲಿಯೇ ಅಡುಗಿದೇ. “ಗು–ಅಂಧಕಾರವನ್ನು, ರು– ಛೆದಿಸುವವನು“. ಅಜ್ಞಾನವೆಂಬ ಅಂಧಕಾರವನ್ನು ನಿರಾಕರಿಸಿ ಜ್ಞಾನವನ್ನು ಬೆಳಗುವವನೇ ನಿಜವಾದ ಗುರು!
“ಬ್ರಹ್ಮಾಂತಾಗುರವಶ್ಚೈವ ಸಂಪ್ರದಾಯಪ್ರವರ್ತಕಾ:” ಎಂದು ಆಚಾರ್ಯರು ತಂತ್ರಸಾರಸಂಗ್ರಹದಲ್ಲಿ ಜೀವನೋಪಾಯಕ್ಕೆ ವಿದ್ಯೆಯನ್ನು ಹೆಳಿಕೊಟ್ಟವರು, ಪ್ರತಿಹಂತದಲ್ಲಿಯೂ ನಮ್ಮನ್ನು ತಿದ್ದಿತೀಡಿದವರಿಂದ ಹಿಡಿದು ಬ್ರಹ್ಮದೇವರವರೆಗೂ, ಎಲ್ಲಾ ಸಂಪ್ರದಾಯಪ್ರವರ್ತಕರೂ ನಮ್ಮ ಗುರುಗಳೇ ಎಂದಿದ್ದಾರೆ. ಮೋಕ್ಷ ನಮ್ಮ ಮುಖ್ಯಗುರಿ, ಅದಕ್ಕೆ ಜ್ಞಾನ ಬೇಕು. ಆ ಜ್ಞಾನವನ್ನು ನಾವೆ ಪುಸ್ತಕವನ್ನು ಓದಿ ಪದೆಯಬಹುದಲ್ಲವೇ? ಗುರುಗಳಾದರು ಯಾಕೆ ಬೇಕು? ಅಂದರೆ ಅದು ಸರಿಯಲ್ಲ. ಮೋಕ್ಷಕ್ಕೆ ಜ್ಞಾನಮಾತ್ರ ಸಾಕಾಗುವುದಿಲ್ಲ. ಗುರ್ವನುಗ್ರಹ ಅತ್ಯಂತ ಆವಶ್ಯಕ. ಜ್ಞಾನವಿಲ್ಲದೆ ಮೋಕ್ಷವಿಲ್ಲ, ಗುರುಗಳಿಲ್ಲದೆ ಜ್ಞಾನವಿಲ್ಲ. ಆದ್ದರಿಂದ ಗುರುಗಳ ಅತ್ಯಂತ ಆವಶ್ಯಕತೆ ಇದೆ. ಹಾಗಾದರೆ ಗುರುಗಳ ಅನುಗ್ರಹವನ್ನಾದರು ನಾವು ಹೇಗೆ ಪದೆಯುವುದು? ಎಂದರೆ ಅದು ಗುರುಸೇವೆಯಿಂದ ಮಾತ್ರ ಸಾಧ್ಯ. ಗುರುಸೇವೆಯು ತಪ್ಪಿದ್ದಲ್ಲ ಎಂದು ಭಗವಂತನೇ ರಾಮಕೃಷ್ಣಾದಿರೂಪಗಳಲ್ಲಿ ತೋರಿಸಿದ್ದಾನೆ. ಗುರುಸೇವೆಯ ಮಾಹಾತ್ಮೆಯು ಎಂತಹದ್ದು ಎಂದು ವ್ಯಾಸರು ಭಾರತದಲ್ಲಿ ಆರುಣಿ, ಉಪಮನ್ಯು ಮೊದಲಾದವರ ಕಥೆಗಳ ಮೂಲಕ ತಿಳಿಸಿದ್ದಾರೆ.
ಮಧ್ವಸಿದ್ಧಂತದಲ್ಲಿ ನಿಯತಗುರುಗಳು, ಅನಿಯತಗುರುಗಳು ಎಂದು ಗುರುಗಳಲ್ಲಿ ದ್ವೈವಿದ್ಯವಿದೆ. ನಿಯತಗುರುಗಳ ಪ್ರಾಪ್ತಿಗೆ ಜ್ಞಾನವನ್ನು ನೀಡುವವರು ಅನಿಯತಗುರುಗಳು. ಸ್ವರೂಪಾವಿರ್ಭಾವಗೊಳಿಸಿ ಮೋಕ್ಷಮಾರ್ಗವನ್ನು ಉಪದೇಶಿಸುವವರು ನಿಯತಗುರುಗಳು. ಈ ವಿಷಯದಬಗ್ಗೆ ಆಚಾರ್ಯರು ಅನುವ್ಯಾಖ್ಯಾನಾದಿಗ್ರಂಥಗಳಲ್ಲಿ ಬಹಳ ವಿಸ್ತಾರವಾಗಿ ನಿರೂಪಿಸಿದ್ದಾರೆ. ಹಾಗೆ ಸಾಮಾನ್ಯವಾಗಿ ತಿಳಿಯುವುದಾದರೆ ಗುರುಗಳಾದ ಶ್ರೀವಿಶ್ವೇಶತೀರ್ಥರ ಉದಾಹರಣೆಯನ್ನು ತಿಳಿಯೊಣ.
ಪುಟ್ಟಮಗುವಿನ ಕೈಯಲ್ಲಿ ಮೋಸಂಬಿಯನ್ನು ಕೊಟ್ಟರೆ ಸಿಪ್ಪೆಯನ್ನು ಸುಲಿಯಲು ತಿಳಿಯದೆ ಒಳಗಿನ ರಸವನ್ನು ಅನುಭವಿಸದೇ ಕುಳಿತಾಗ, ತಾಯಿಯು ಸಿಪ್ಪೆಯನ್ನು ಸುಲಿದು ಹಣ್ಣನ್ನು ಬಾಯಲ್ಲಿ ಇಟ್ಟರೆ ಹೇಗೆ ಆನಂದಪದುತ್ತದೊ! ಹಾಗೆಯೇ ನಮ್ಮಲ್ಲಿ ಇರುವ ಸ್ವರೂಪಾನಂದವನ್ನು ಅನುಭವಿಸಲು ತಿಳಿಯದೇ ನಾವು ಇದ್ದಾಗ ಗುರುಗಳೆಂಬತಾಯಿಯು ಅಜ್ಞಾನವೆಂಬ ಸಿಪ್ಪೆಯನ್ನು ಕಳೆಚಿ ಆನಂದವನು ನಮಗೆ ತೋರಿಸುತ್ತಾರೆ. ಆದ್ದರಿಂದ ನಾವು ಮೊದಲಿಗೆ ಅನಿಯತಗುರುಗಳ ಪೂರ್ಣಾನುಗ್ರುಹವನ್ನು ಪಡೆದು, ನಮ್ಮ ಎಲ್ಲಾ ಸತ್ಕಾರ್ಯಗಳನ್ನು ಗುರುಗಳ ಮೂಲಕವೇ ಭಗವಂತನಿಗೆ ಅರ್ಪಿಸಬೇಕು. ಈ ರೀತಿಯನ್ನು ನ್ಯಾಯಸುಧೆಯಲ್ಲಿ ಟೇಕಾಕೃತ್ಪಾದರು “ಗುರುಕಾರುಣ್ಯಸರಣಿಂ ಪ್ರಪನ್ನಾ: ಮಾನ್ಯಾ: ಸ್ಮ:” ಎಂದು ತೋರಿಸಿದ್ದಾರೆ.
ನಮ್ಮ ಎಲ್ಲಾ ಸಾಧನೆಯು ಗುರುಗಳ ಅನುಗ್ರಹದಿಂದಲೇ ಎಂದು ಭಾವಿಸಿದರೆ ಮಾತ್ರ ಆ ನಿಯತಗುರು ಪ್ರಸಾದಮೂಲಕ ಹರಿಪ್ರಸಾದ. ತಂದೆತಾಯಿಗಳ ಸಂಬಂಧ ಮತ್ತು ಬೆರೆ ಸಂಬಂಧಗಳು ಜನ್ಮಾಂತರದಲ್ಲಿ ಬೆರಾದರೂ ನಿಯತಗುರುಗಳ ಸಂಬಂಧವು ನಿತ್ಯವಾದದ್ದು ಆದ್ದರಿಂದ ನಾವು “ಶ್ರೀಗುರುಭ್ಯೋ ನಮ:” ಎಂದು ಸದಾ ಜಪಿಸುತ್ತಾ, ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕು. “ಹರೌ ರುಷ್ಟೆ ಗುರೌ ರುಷ್ಟೆ ನಕಷ್ಚನ“ ಎಂಬಂತೆ ಗುರುಗಳ ಅವಗ್ರಹಕ್ಕೆ ಪಾತ್ರರಾದರೆ ನಮ್ಮನ್ನು ಯಾರು ಕಾಪಾಡುವುದಿಲ್ಲ. ಆದ್ದರಿಂದ ನಾವು ಎಲ್ಲಾಗುರುಗಳಲ್ಲಿಯೂ ಬಹಳ ವಿನಯ, ಭಕ್ತಿ ಶ್ರದ್ಧೆಯಿಂದ ನಡೆದುಕೊಳ್ಳಬೇಕು.
ಶ್ರೀಕೃಷ್ಣಾರ್ಪಣಮಸ್ತು
ಎಸ್. ಸುಘೋಶ